ನೀಲಿ ನರಿ
ಒಂದು ರಾತ್ರಿ ಚಂಡರವ ಎಂಬ ಹಸಿದ ನರಿ ಆಹಾರ ಹುಡುಕುತ್ತಾ ಊರೊಳಗೆ ಬಂತು. ನಾಯಿಗಳು ಅದನ್ನು ಅಟ್ಟಿಸಿಕೊಂಡು ಬಂದವು. ಅದು ನೀಲಿ ಬಣ್ಣ ತುಂಬಿದ್ದ ಒಂದು ದೊಡ್ಡ ತೊಟ್ಟಿಗೆ ಹಾರಿತು.
ಅದು ಹೊರಗೆ ಬಂದಾಗ, ಮೂಗಿನಿಂದ ಬಾಲದವರೆಗೆ ಪೂರ್ತಿ ಗಾಢ ನೀಲಿಯಾಗಿತ್ತು!
ಅದು ಕಾಡಿಗೆ ವಾಪಸ್ ಹೋಯಿತು. ಕಾಡಿನ ಪ್ರಾಣಿಗಳು ಹಿಂದೆಂದೂ ನೀಲಿ ಬಣ್ಣದ ಪ್ರಾಣಿಯನ್ನು ನೋಡಿರಲಿಲ್ಲ. “ನೀನು ಯಾರು?” ಎಂದು ನಡುಗುತ್ತಾ ಕೇಳಿದವು.
ನರಿಗೆ ಒಂದು ಉಪಾಯ ಹೊಳೆಯಿತು. “ನಿಮ್ಮ ರಾಜನಾಗಲು ದೇವರು ನನ್ನನ್ನು ಕಳುಹಿಸಿದ್ದಾರೆ,” ಎಂದು ಗರ್ವದಿಂದ ಹೇಳಿತು. ಸಿಂಹಗಳು, ಹುಲಿಗಳು, ಆನೆಗಳು ಅದಕ್ಕೆ ತಲೆಬಾಗಿದವು. ಒಳ್ಳೊಳ್ಳೆಯ ಆಹಾರ ತಂದುಕೊಟ್ಟವು.
ನೀಲಿ ನರಿಗೆ ಗರ್ವ ತುಂಬಾ ಹೆಚ್ಚಾಯಿತು. ಉಳಿದ ನರಿಗಳು ತನ್ನನ್ನು ಗುರುತು ಹಿಡಿದುಬಿಟ್ಟಾವು ಎಂದು ಹೆದರಿ, ಅವೆಲ್ಲವನ್ನೂ ಕಾಡಿನಿಂದ ಓಡಿಸಿತು.
ಒಂದು ಸಂಜೆ, ದೂರದಲ್ಲಿದ್ದ ನರಿಗಳು ಚಂದ್ರನನ್ನು ನೋಡಿ ಊಳಿಡತೊಡಗಿದವು. ನೀಲಿ ನರಿಗೆ ಎಷ್ಟು ಖುಷಿಯಾಯಿತೆಂದರೆ, ಅದೂ ತಲೆ ಎತ್ತಿ ಊಳಿಟ್ಟಿತು: “ಊ-ಊ-ಊ-ಊ!”
ಅಷ್ಟೇ! ಅದು ಬರೀ ನರಿ ಎಂದು ಎಲ್ಲರಿಗೂ ಗೊತ್ತಾಯಿತು. ಮೋಸ ಹೋದೆವಲ್ಲ ಎಂದು ಪ್ರಾಣಿಗಳಿಗೆ ತುಂಬಾ ಕೋಪ ಬಂತು. ನೀಲಿ ನರಿ ಕಾಡು ಬಿಟ್ಟು ಶಾಶ್ವತವಾಗಿ ಓಡಿಹೋಗಬೇಕಾಯಿತು.